25/08/2026
ದಿನಕ್ಕೊಂದು ಅನುಭವದ ಕತೆ - The Real Estate Stories
ಹೀಗೊಂದು ಅನುಭವ - 4
ನನ್ನ ಈ ಉದ್ಯೋಗದ (Real Estate) ಪ್ರಾರಂಭದ ದಿನಗಳು.
ಆಗೆಲ್ಲ ಯಾರೇ ಕರೆದರೂ, ಎಷ್ಟೇ ದೂರದ ಜಮೀನು ಇದ್ದರೂ ಅಲ್ಲಿಗೆ ಹೋಗಿ, ಜಮೀನಿನ ವಿಡಿಯೋಗಳನ್ನು ಮಾಡಿ ನನ್ನ page ನಲ್ಲಿ ಅದನ್ನು ಯಥಾವತ್ತಾಗಿ — ಜಮೀನಿನ ಸಂಪರ್ಕ ರಸ್ತೆ, ಮಾಲಿಕರ ಪರಿಚಯ, ಜಮೀನಿನ ಅಷ್ಟೂ ಮಾಹಿತಿಗಳನ್ನು ನೇರವಾಗಿ ವಿಡಿಯೋದಲ್ಲಿ ಪ್ರಸಾರ ಮಾಡುವುದು — ನನ್ನ ದಡ್ಡತನಗಳಲ್ಲಿ ಪ್ರಮುಖ ಪಾತ್ರವಾಗಿತ್ತು.
ಹೀಗೇ ಒಂದು ದಿನ...
ಒಬ್ಬರು ತಮ್ಮ ಜಮೀನು ಮಾರಬೇಕು, ಒಳ್ಳೆಯ ಪಾರ್ಟಿ ತನ್ನಿ ಅಂತ ಹೇಳುತ್ತಾರೆ.
ನಾನು ಕಾರ್‌ನಲ್ಲಿ petrol ತುಂಬಿಸಿ, ದಾರಿ ಖರ್ಚಿಗೆ ಮಾರಿ ಬಿಸ್ಕೆಟ್ ಪ್ಯಾಕ್, ನೀರ್ ಬಾಟ್ಲಿ ಎಲ್ಲದರ ಜೊತೆ ಸೀದಾ ಹೋಗಿದ್ದು ಸುಮಾರು 125 km ಇರುವ ಸಾಗರದ ಹತ್ತಿರದ ಒಂದು ಊರಿಗೆ.
ಹತ್ತಿರ ಹೋಗುತ್ತಿದ್ದಂತೆ ಅವರು ಕಳಿಸಿದ ಲೊಕೇಶನ್ ಮ್ಯಾಪ್ ನೋಡಿಕೊಂಡು ಸೀದಾ ತೋಟದ ಬಳಿ ನಿಂತು ಫೋನ್ ಮಾಡಿದಾಗ,
“ಬನ್ನಿ, ಗೇಟ್ ಓಪನಿಂಗ್ ಇದೆಯಲ್ಲ” ಅಂದರು.
ಒಳಹೋದ ನನಗೆ ಸೀದಾ ತೋಟಕ್ಕೆ ಕರೆದುಕೊಂಡು ಹೋಗಿ ತೋಟವೆಲ್ಲ ತಿರುಗಿಸಿ, ಮನೆಯ ಹತ್ತಿರ ನಿಂತೇ ಎಲ್ಲಾ ವಿವರಣೆ ಕೊಟ್ಟದ್ದೂ ಆಯಿತು.
ನಂತರ ಒಳಗಿನಿಂದ ಕೂಗಿದ ಕರೆ ಎಜಮಾನರಿಗೆ —
“ಹೊಯ್, ಗಂಟೆ 2.30 ಆತು, ಊಟ ಗೀಟಾ ಮಾಡುದಿಲ್ವಾ ಅಂತ...”
ನಂಗೂ ತೀರಾ ಹಸಿವಾಗಿತ್ತು.
ಹಳ್ಳಿ ಮನೆ, ಬಾಳೆ ಎಲೆ ಊಟ, ಹಪ್ಪಳ ಸಂಡಿಗೆ, ಮಜ್ಜಿಗೆ ಹುಳಿ, ಚಟ್ನಿ — ಎಲ್ಲವೂ ಒಮ್ಮೆಲೆ ಸುಯ್ಯ್ ಅಂತ ಕಣ್ಣೆದುರು ಬಂದು ನಿಂತಿತ್ತು.
ನಂತರ ಎಜಮಾನರು, “ಆಯ್ತು, ಒಳ್ಳೆ ಗಿರಾಕಿ ತನ್ನಿ, ನಿಮ್ಮ ಕಮಿಷನ್ ಎಷ್ಟು...” ಎಲ್ಲಾ ಮಾತಾಡುತ್ತಲೇ ಮನೆ ಬಾಗಿಲಲ್ಲೇ ಅಡ್ಡ ನಿಂತು,
“ವ್ಯಾಪಾರ ಆದಮೇಲೆ ಎಲ್ಲಾ ನೋಡುವ, ನೀವ್ ಹೇಳಿದಷ್ಟೆಲ್ಲಾ ಕಮಿಷನ್ ಕೊಡಕ್ಕಾಗುತ್ತಾ” ಅಂದಿದ್ದು ಒಂದೇ.
ಬಾಗಿಲಿಗೆ ಅಡ್ಡ ನಿಂತ ಆಸಾಮಿ ಬೆನ್ನು ತೋರಿಸಿ ಒಳ ಹೋಗಿ, ಸೀದಾ ನನ್ನ ಕಣ್ಣಿಗೆ ಕಂಡ ಅದೇ ಹಪ್ಪಳ ಸಂಡಿಗೆ ಮಜ್ಜಿಗೆಹುಳಿ ತಿನ್ನುತ್ತಾ ಕುಳಿತರೇನೋ!
ಊಟಕ್ಕೆ ಬನ್ನಿ ಅನ್ನುವ ಕನಿಷ್ಠ ಉಪಚಾರವೂ ಮಾಡಲಿಲ್ಲ.
ಕಾರ್ನಲ್ಲಿದ್ದ ಮಾರಿ ಬಿಸ್ಕೆಟ್ ಪೂರಾ ಹಪ್ಪಳದಷ್ಟೇ ಕುರುಮುರು ಸೌಂಡ್ ಮಾಡಿಕೊಂಡು ಸಾಗರಕ್ಕೆ ಹೋಗಿ ಊಟ ಮಾಡಿದ್ದು ಆಯಿತು.
ಮನಸ್ಸಲ್ಲೇ ಅಂದುಕೊಂಡೆ,
“ತೀರಾ ಕರೆದಲ್ಲಿಗೆ ಹೋಗಿ ಉಪವಾಸ ಬರಕೂಡದು. ಒಂದು ಡಬ್ಬಿ ಚಿತ್ರಾನ್ನ ಮಾಡಿಸಿಕೊಂಡು field work ಗೆ ಹೋಗಬೇಕು” ಅಂತ.
ಮನೆಗೆ ಬಂದು ನನ್ನ page ನಲ್ಲಿ ಎಲ್ಲಾ ಮಾಹಿತಿ ಹಾಕಿ, ಚಂದದೊಂದು video edit ಮಾಡಿ ಪ್ರಸಾರ ಮಾಡಿ ಮಲಗಿದೆ.
ಬೆಳಿಗ್ಗೆ ಎದ್ದಾಗ ಒಂದಷ್ಟು ಕಾಮೆಂಟ್ಸ್, ವಾಟ್ಸಾಪ್ನಲ್ಲಿ msg ಬಂದಿದ್ದವು.
“ಜಮೀನು ಬೇಕು, ಎಷ್ಟು ಕಮ್ಮಿ ಮಾಡ್ತಾರೆ, ಯಾವ್ ಜಾತಿ ಜನ, ನೀರ್ ಇದ್ಯಾ, ರೆಕಾರ್ಡ್ಸ್ ಕಳಿಸಿ...” ಇತ್ಯಾದಿ.
ಕಮೆಂಟ್ಸ್ ಗೆ ಉತ್ತರ ಕೊಡುತ್ತ ಕುಳಿತೆ.
ಕೆಲವರಿಗೆ ದಾರಿ ಹೇಳಿದೆ.
ನೀರು ಕೇಳಿದವರಿಗೆ “borewell ಇದೆ”,
ಚೌಕಾಸಿ ಮಾತಾಡಿದವರಿಗೆ “ಬನ್ನಿ, ಓನರ್ ಮುಂದೆಯೇ (ಉಪವಾಸ ಕೂತು) ಚರ್ಚಿಸೋಣ” ಎಂದೂ ಹೇಳಿದೆ.
ಜಾತಿ ಕೇಳಿದವರಿಗೆ ಏನೂ ಹೇಳಲಿಲ್ಲ, ಸುಮ್ಮನಾದೆ.
ನಮ್ಮ ಜಾತಿ, ಅವರ ಜಾತಿ ಒಂದೇ ಆದರೂ ನನ್ನನ್ನೇ ಊಟಕ್ಕೆ ಕರೆದಿಲ್ಲ ಎಂದು ಮನಸ್ಸಲ್ಲೇ ಅಂದುಕೊಂಡು,
“ಅಡಿಗೆ ಮನೆಮಂದಿಗೆ ಮಾತ್ರ ಮಾಡಿದ್ದಿರಬಹುದು” ಅಂತ ಸುಮ್ಮನಾಗಿ ಕೆಲವು ಫೋನ್ ಕರೆಗಳನ್ನು ಉತ್ತರಿಸುತ್ತಾ...
ಒಂದು ಸೀರಿಯಸ್ ಪಾರ್ಟಿ ಫೋನ್ ಮಾಡುತ್ತಾರೆ.
ಜಮೀನು ನೋಡಲು ಬರುವುದಾಗಿ ತಿಳಿಸುತ್ತಾರೆ.
“ಸರಿ, ನಾಳೆಯೇ ಹೋಗೋಣ” ಎಂದರೆ,
“ಇಲ್ಲ, ಇಂದೇ ಬನ್ನಿ, ಜಾಗ ತೋರಿಸಿ” ಎಂದೂ ಒತ್ತಾಯಿಸುವ ಅವರು, ಸಾಗರದ ಒಂದು ಭಾಗಕ್ಕೆ ಒಂದು ಸಮಯಕ್ಕೆ ಬನ್ನಿ ಎಂದೂ ತಿಳಿಸುತ್ತಾರೆ.
ಭಯಂಕರ ಹುರುಪಿನಲ್ಲಿ ಮಿಲ್ಟ್ರಿ ಪ್ಯಾಂಟ್, ಒಳ್ಳೆಯ ಒಂದು T-shirt, ಹೊಂದಿಕೆ ಆಗುವಂತಹ ಶೂ, ಮಾಮೂಲಿನಂತೆ ಕಪ್ಪು ಕನ್ನಡಕ — ಎಲ್ಲದರ ಜೊತೆ ಚಂದ ತಯಾರಾಗಿ, ನಾನೂ ಹಿಂದಿನ ದಿನದ ಹಪ್ಪಳ ಸಂಡಿಗೆ ಮಜ್ಜಿಗೆಹುಳಿ ಎಲ್ಲವೂ ಹುಳಿಯೋ ಹುಳಿ, ಅದಕ್ಕಿಂತ ನಮ್ಮ ಮನೆಯ ಹುಳಿ ಚಿತ್ರಾನ್ನವೇ ಲೇಸೆಂದು ಚಿತ್ರಾನ್ನ ಮಾಡಿಸಿ ಡಬ್ಬಿಗೂ ತುಂಬಿಸಿ ಹೊರಟಿದ್ದಾಯಿತು.
ಸಾಗರಕ್ಕೆ ಹೋದಮೇಲೆ ಅವರು ತಿಳಿಸಿದ ಜಾಗಕ್ಕೆ ಹೋಗಿ, ಅಲ್ಲಿಂದ ನನ್ನದೇ ಕಾರ್‌ನಲ್ಲಿ ಅವರನ್ನು ಕರೆದುಕೊಂಡು ಜಮೀನಿನ ಕಡೆ ಹೊರಟವನಿಗೆ ಪಕ್ಕದಲ್ಲಿ ಕುಳಿತ ಪಾರ್ಟಿ,
“ಇಲ್ ಚೂರ್ ನಿಲ್ಸಿ, ಒಬ್ರು ಬರ್ತಾರೆ” ಅಂತ ಹೇಳುತ್ತಾರೆ.
ಅವರನ್ನೂ ಕೂರಿಸಿಕೊಂಡು ಸ್ವಲ್ಪವೇ ದೂರ ಹೋದಾಗ ಪಾರ್ಟಿ ಹೇಳುತ್ತಾರೆ,
“ಇನ್ನೊಬ್ಬರು ಇದ್ದಾರೆ, ಫೋನ್ ಮಾಡುತ್ತೇನೆ. ಸ್ವಲ್ಪ ಕಾಯುವ ನಿಲ್ಲಿಸಿ.”
ಆಗ ನನಗೆ ಯಾಕೋ ಜೋಗ ಜಲಪಾತ, ಕೆಳದಿ ಇಕ್ಕೇರಿ ಟ್ರಿಪ್ ಗೆ ಫ್ರಂಡ್ಸ್ ಎಲ್ಲಾ ಪುಕ್ಸಟ್ಟೆ ಕಾರ್ book ಮಾಡಿದ್ದೆನೋ ಅಂದುಕೊಳ್ಳುತ್ತಾ,
“ಯಾರ್ ಸಾರ್ ಅವ್ರು? ಎಷ್ಟು wait ಮಾಡ್ಬೇಕು?” ಕೇಳುತ್ತೇನೆ.
ಆಗ ಈ ಆಸಾಮಿ ಹೇಳುತ್ತಾರೆ,
“ಅವರೇ ಪಾರ್ಟಿ” ಅಂತ. 🙏
“ನಿನ್ನೆ ಹೇಳಿದ್ದು ನೀವೇ ಜಮೀನು ಖರೀದಿ ಮಾಡುವವರು ಅಂತ ಅಲ್ವಾ?” ಅಂದಿದ್ದಕ್ಕೆ,
“ಇಲ್ಲ, ಈಗ ಬರುವವರೇ ಪಾರ್ಟಿ” ಅಂತಲೂ, ವ್ಯಾಪಾರವಾದರೆ ಇವರಿಬ್ಬರಿಗೆ ಕಮಿಷನ್ ಪಾಲು ಹಂಚಿಕೆಯ ವಿಷಯವನ್ನೂ ಗ್ಯಾಪ್‌ನಲ್ಲಿ ತೂರುತ್ತಾರೆ.
ನನಗೆ,
“ಇದ್ಯಾಕಪ್ಪ ಬೇಕಿತ್ತು ನಂಗೆ? ಇಷ್ಟ್ ದೂರ ಬಂದು ಇಲ್ಲಿ ಇಬ್ರು ಪಾರ್ಟ್ನರ್‌ಗಳು ಬೇರೆ ಹುಟ್ಕಂಡು, ಇವ್ರ್ ನೆಲ್ಲ ನಂದೇ ಕಾರ್ ಅಲ್ಲಿ free ಆಗಿ ಟ್ರಿಪ್ ಮಾಡಿಸೋ ಥರ ಹೋಗಿ ಜಾಗ ತೋರಿಸಿ, ನಾಳೆ ನನ್ನೇ ಬಿಟ್ಟು ಇವರುಗಳೇ ವ್ಯಾಪಾರ ಮಾಡಿದರೆ ನನ್ನ ಕತೆ ಏನು?”
ಹೇಗಿದ್ದರೂ ಇವರೂ ಸಾಗರದವರೇ ಎಂದು ಯೋಚಿಸಿ,
“ಸ್ವಾಮಿ, ಇದ್ಯಾಕೋ ಸರಿ ಇಲ್ಲ. ನಾನು ಜಾಗ ತೋರಿಸಿ ಹೋದ ನಂತರ ನೀವುಗಳೇ ವ್ಯಾಪಾರ ಕುದುರಿಸಿದರೆ?” ಎಂದು ಪ್ರಶ್ನೆ ಮಾಡಿದೆ.
“ಇಲ್ಲ ಸಾರ್, ನಾವ್ ಹಂಗಿದ್ದವ್ರ್ ಅಲ್ವೇ ಅಲ್ಲ” ಅಂತ ಭರವಸೆ ಕೊಟ್ಟಮೇಲೆ ಮೂರನೇ ಪಾರ್ಟಿಯನ್ನೂ ಜೊತೆಗೆ ಕರ್ಕೊಂಡು ಜಮೀನಿನ ಗೇಟ್ ಬಳಿ ನಿಲ್ಲಿಸಿದೆ.
ಜೊತೆಗೆ ಬಂದಿದ್ದ ಒಬ್ಬ ಪುಣ್ಯಾತ್ಮ ಪಕ್ಕದವನಿಗೆ ಅಲ್ಲೇ ಹೇಳ್ತಾನೆ,
“ಬಾವಾ, ಇದ್ ನಂಗ್ ಗೊತ್ತಿತ್ ಕಣಾ, ಇದು ಅಂದಿದ್ರೆ ನಾನೇ ಹೇಳ್ತಿದ್ದೆ” ಅಂತ ಹೇಳಿ ನನಗೂ ಅಲ್ಲೇ ಶಾಕ್ ಕೊಟ್ಟು,
“ಇದಾದ್ರೆ ಬೇಡ, ವಾಪಾಸ್ ಹೋಗಣ ಬಾವಾ” ಅಂತಾನೆ.
“Video ಬೇರೆ ನೋಡಿದ್ದೀರಲ್ಲಾ, ಗೊತ್ತಾಗಿಲ್ವಾ ಇದೇ ಜಾಗ ಅಂದ್ರೆ?”
ಒಬ್ಬ video ನೋಡಿದ್ದು, ಇನ್ನೊಬ್ಬ ಅವ್ನ್ ಫ್ರೆಂಡು ಇವ್ನ್ ಹೇಳ್ದಾ ಅಂತ ಕಾರ್ ಹತ್ತಿದ್ದು, ಇನ್ನೊಬ್ರು ಪಾರ್ಟಿ ಅಂತ ಬಂದಿದ್ರಲ್ಲ, ಅದೇ ನಿಜ್ವಾದ್ ಪಾರ್ಟಿ!!?
ಮೂರೂ ಜನ ಮುಖ ಮುಖ ನೋಡ್ಕಂಡ್,
“ಚೂರ್ ಮಿಷ್ಟೀಕ್ ಆಗಿದೆ ಸಾರ್, ಇದು ಬೇಡ” ಅಂತ ಹೇಳಿ,
ನಾನ್ ತಂದಿದ್ ಚಿತ್ರಾನ್ನ ನೂ ತಿನ್ನಕ್ ಬಿಡ್ಡೆ ವಾಪಾಸ್ ಸಾಗರ ಬಿಡಿ ಅಂತ ಒತ್ತಾಯ ಮಾಡಿದ್ದು ನಂಗ್ ಯಾಕೋ,
“ಥೋ, ಇದೂ ಒಂದ್ ಬ್ಯುಸಿನೆಸ್ಆ?” ಅನ್ನೋ ಅಷ್ಟು ಜಿಗುಪ್ಸೆ ಬರೋ ಥರ ಮಾಡ್ಬಿಟ್ರು.
ಇನ್ನೇನ್ ಮಾಡೋದು ಅಂತ ವಾಪಾಸ್ ಬಿಟ್ ಹೇಳ್ದೆ,
“ಸುಮ್ಮನೆ ನನ್ ಅಲ್ಲಿಂದ ಇಲ್ಲಿತನಕ ಬರಕ್ ಹೇಳಿದ್ರಲಾ ಸಾರ್” ಅಂತ.
ಅದಕ್ಕೆ ಒಬ್ಬ ಹೇಳ್ತಾನೆ,
“ನಿಮ್ ಕೆಲ್ಸ ನೇ ಅದಲ್ವಾ!”
ನಾನು ದೂಸ್ರಾ ಮಾತಾಡದೆ ಸೀದಾ ಕಾರ್ ಸ್ಟಾರ್ಟ್.
ಡಬಲ್ ರೋಡ್ ದಾಟಿ ಚೂರ್ ಮುಂದುಕ್ ಹೋಗಿ ಚಿತ್ರಾನ್ನ ತಿಂದು, ಅಲ್ಲೇ ಒಂದ್ ಸ್ಟಾರ್ ಹಾಕಿ ಸ್ವಲ್ಪ ತಲೆ free ಆಗ್ಲಿ ಅಂತ ಅಲ್ಲೇ ರೆಸ್ಟ್ ಮಾಡಿ ಮತ್ತೆ ಕಾರ್ ಸ್ಟಾರ್ಟ್ ಮಾಡಿ ಕೊಪ್ಪಕ್ಕೆ ಹೊರಟೆ.
---
ಕೆಲಸ ಕಲಿಯುವ ಕಾಲ, ಜನಗಳನ್ನ ಅರಿಯುವ ಕಾಲ.
ಸರ್ಕಸ್ ನೋಡಿ ಗೊತ್ತಿತ್ತು, ಅವತ್ತು ನಾನೇ ಸರ್ಕಸ್ ಮಾಡಿದ ಅನುಭವ ಆಯ್ತು.
ಜೋಕರ್‌ನ ನೋಡಿ ನಕ್ಕಿದ್ದು ಗೊತ್ತಿತ್ತು, ಅವತ್ತು ನಾನೇ ಒಬ್ಬ ಜೋಕರ್ ಆಗಿದ್ದೆ.
ಯಾರ್ ಯಾರು ನನ್ನ ನೋಡಿ ನಕ್ಕರೋ ನಾಕಾಣೆ.
ಜೀವನ ಪಾಠ ಕಲಿಸುತ್ತಿತ್ತು.
ಕಲಿಯುತ್ತಾ ಬಂದೆ.
ಕಲಿಯುತ್ತಿರುವೆ.
ಇನ್ನೂ ಕಲಿಯುವುದಿದೆ...
Real Estate ಸುಲಭವಲ್ಲ. ಕಮಿಷನ್ ಸುಮ್ಮನೆ ನಾವು ಪಡೆಯುವುದಲ್ಲ.
ಎಲ್ಲರದ ಹಿಂದೆ ಇಂತಹ ಹಲವು ಕತೆಗಳು, ಆಸೆ ನಿರಾಸೆಗಳು ತುಂಬಿರುತ್ತವೆ.
Sharvari Consultants ಇಷ್ಟು ಬೆಳೆದಿದೆ ಎಂದಾದರೆ ಇಂತಹ ಹಲವು ಅನುಭವಗಳಿಂದಲೇ.
ಸಹಕಾರ ಹೀಗೇ ಇರಲಿ ❤️💐
Sharvari Consultants & Landholdings
#ಜೀವನಪಾಠ
#ಅನುಭವದಕತೆ
#ಹೀಗೊಂದುಅನುಭವ
#ಜೀವನದಅನುಭವಗಳು
#ಕೆಲಸಕಲಿಯುವಕಾಲ
#ಜನಗಳನ್ನಅರಿಯುವಕಾಲ
#ಕಮಿಷನ್
#ರಿಯಲ್ಎಸ್ಟೇಟ್